ರಾಜೇಂದ್ರಸಿಂಗ್ (ಬಾಬು), ಎಸ್ ವಿ
(1952- ). ಕನ್ನಡದಲ್ಲಿ ಶ್ರೀಮಂತ ಚಿತ್ರಗಳ ಪರಂಪರೆಗೆ ತಾಂತ್ರಿಕ ಪರಿಣತಿಗೆ ನಾಂದಿ ಹಾಡಿದ ನಿರ್ದೇಶಕರುಗಳಲ್ಲಿ ಎಸ್.ವಿ.ರಾಜೇಂದ್ರಸಿಂಗ್ (ಬಾಬು) ಕೂಡ ಒಬ್ಬರು. ಸ್ವಾತಂತ್ರ್ಯ ಹೋರಾಟಗಾರರೂ ಹಾಗೂ ಕನ್ನಡ ಚಿತ್ರರಂಗದ ಆಧಾರಸ್ತಂಭಗಳಲ್ಲೊಬ್ಬರು ಆದ ಮಹಾತ್ಮ ಸಂಸ್ಥೆಯ ರೂವಾರಿ ಡಿ.ಶಂಕರಸಿಂಗ್ ಅವರ ಪುತ್ರ ರಾಜೇಂದ್ರಸಿಂಗ್‍ಬಾಬು. ತಾಯಿ ಚಲನಚಿತ್ರ ಕಲಾವಿದೆ ಪ್ರತಿಮಾ ದೇವಿ. ಹುಟ್ಟಿದ್ದು ಮೈಸೂರಿನಲ್ಲಿ, 1952ರ ಅಕ್ಟೋಬರ್ 22ರಂದು. ಎಳೆಯ ವಯಸ್ಸಿನಲ್ಲಿಯೇ ತಂದೆ ನಿರ್ಮಿಸಿ, ನಿರ್ದೇಶಿಸಿದ ಚಿತ್ರಗಳಲ್ಲಿ ಬಾಲನಟರಾಗಿ (ಭಕ್ತಚೇತ) ಅಭಿನಯಿಸಿದ ಬಾಬು ತಂದೆಯೊಂದಿಗೆ ಚಿತ್ರ ನಿರ್ಮಾಣದ ಎಲ್ಲ ವಿಭಾಗಗಳಲ್ಲಿಯೂ ಅನುಭವ ಹಾಗೂ ಪರಿಣತಿ ಪಡೆದರು. ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ.ಪದವೀಧರರಾದ ಬಾಬು ಅವರಿಗೆ ಚಿತ್ರೋದ್ಯಮದಲ್ಲಿ ಸಹಜವಾಗಿ ಆಸಕ್ತಿ ಬೆಳೆಯಿತು. ಚಲನಚಿತ್ರದ ಬಗೆಗೆ ಪ್ರಕಟಗೊಂಡ ಉತ್ಕøಷ್ಟ ಸಾಹಿತ್ಯವನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದರು. ನಾನಾ ಭಾಷೆಗಳಲ್ಲಿ ಬಂದ ಉತ್ತಮ ಚಿತ್ರಗಳನ್ನೆಲ್ಲಾ ನೋಡಿದರು, ಮಂಥನ ಮಾಡಿದರು. 1974ರಲ್ಲಿ ಹಾಲಿವುಡ್‍ನ ವಾರ್ನರ್ ಸಂಸ್ಥೆಯವರು ಮೈಟಿ ಹಿಮಾಲಯನ್ ಚಿತ್ರಣಕ್ಕೆ ಬಂದಾಗ, ಆ ತಂಡದೊಡನೆ ದುಡಿದು ತಮ್ಮ ಜ್ಞಾನಾನುಭವವನ್ನು ವಿಸ್ತಾರಗೊಳಿಸಿಕೊಂಡರು. 1975ರಲ್ಲಿ ತೆರೆಕಂಡ ``ನಾಗಕನ್ಯೆ ಬಾಬು ನಿರ್ದೇಶನದ ಪ್ರಥಮ ಚಿತ್ರ. 1977ರಲ್ಲಿ ಬಾಬು ನಿರ್ದೇಶಿಸಿದ ``ನಾಗರಹೊಳೆ ನಿರ್ಮಾಣ ಹಾಗೂ ತಾಂತ್ರಿಕತೆಗಳಲ್ಲಿ ಶ್ರೀಮಂತವೆನಿಸಿದ ಚಿತ್ರ. ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಅತ್ಯಂತ ಯಶಸ್ವಿಯಾದ ಈ ಚಿತ್ರದಲ್ಲಿ ನಟಿಸಿದ ನಾಲ್ವರು ಬಾಲನಟರಿಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿತು. 

ರಾಜೇಂದ್ರಸಿಂಗ್ ಬಾಬು ಅವರು ರಾಜಕೀಯ ಹಿನ್ನೆಲೆಯ ಚಿತ್ರಗಳ ಸೃಷ್ಟಿಗೂ ನಾಂದಿ ಹಾಡಿದವರು. 1981ರಲ್ಲಿ ತೆರೆಕಂಡ ಬಾಬು ನಿರ್ದೇಶನದ ಅಂತ ಈ ನಿಟ್ಟಿನಲ್ಲಿನ ಮೊದಲ ಚಿತ್ರ. ಈ ಚಿತ್ರದಲ್ಲಿ ಕನ್ವರ್‍ಲಾಲ್ ಆಗಿ ನಟಿಸಿದ ಅಂಬರೀಷ್‍ಗೆ ಬೇರೆಯದೇ ಆದ ಇಮೇಜ್ ನೀಡಿದ ಚಿತ್ರ. ಸೆನ್ಸಾರ್ ಆಕ್ಷೇಪಣೆಗೆ ಗುರಿಯಾದರೂ, ಹೋರಾಟ ನಡೆಸಿ ಬಾಬು ತೆರೆಗಿತ್ತ ``ಅಂತ ಕನ್ನಡದ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದು. ಭೂಗತ ಜಗತ್ತಿನ ಪೋಲಿಸ್ ರಾಜಕಾರಣಿಗಳ ಅಕ್ರಮ ಚಟುವಟಿಕೆಗಳ ಚಿತ್ರಣ ಸಾಮಾನ್ಯ. ಈ ಸಾಮಾನ್ಯ ಘಟನೆಗಳ ಹಂದರವೇ ಆದರೂ ಮೂಲ ಕಾರಣ ಅದ್ಭುತ ಚಿತ್ರವಾಗಲು ಬಾಬುರವರ ನಿರೂಪಣಾ ಕೌಶಲವೇ ಮೂಲವಾಯಿತು. ಅಂತಕ್ಕೆ ಉತ್ತಮ ಚಿತ್ರ ನಾಟಕ ಪ್ರಶಸ್ತಿ ಛಾಯಾಗ್ರಹಣ ಪ್ರಶಸ್ತಿಗಳು (1981-82) ಲಭಿಸಿದವು. 1981ರಲ್ಲಿ ತೆರೆ ಕಂಡ ಸಿಂಹದ ಮರಿ ಸೈನ್ಯ ಕೂಡ ಪ್ರಶಸ್ತಿಗಳ ಗೌರವಕ್ಕೆ ಪಾತ್ರವಾಯಿತು. ಬಾಬುರವರ ಜನಪ್ರಿಯತೆಯನ್ನು ಉತ್ತುಂಗಕ್ಕೆ ಏರಿಸಿದ ಚಿತ್ರ `ಬಂಧನ (1984) ಈ ಚಿತ್ರ ರಾಜ್ಯ ಸರಕಾರದ ಪ್ರಶಸ್ತಿಗಲ್ಲದೆ, ನಿರ್ಮಾಪಕ-ನಿರ್ದೇಶಕರಿಗೆ ರಜತ ಕಮಲ ಪ್ರಶಸ್ತಿ ದೊರಕಿಸಿತು. ಬಂಧನ ಬೆಂಗಳೂರಿನಲ್ಲಿ ವಜ್ರೋತ್ಸವ, ರಾಜ್ಯದ ಹಲವೆಡೆ ರಜತೋತ್ಸವ ಆಚರಿಸಿಕೊಂಡಿತು. ಆರ್ಥಿಕ ದೃಷ್ಟಿಯಿಂದಲೂ ಯಶಸ್ವಿಯಾದ ಚಿತ್ರ.   ``ಮುತ್ತಿನ ಹಾರ ಇವರ ನಿರ್ದೇಶನದ ಮತ್ತೊಂದು ಚಿರಸ್ಮರಣೀಯ ಚಿತ್ರ. ಕೊಡಗಿನ ನಿಸರ್ಗ ಸೌಂದರ್ಯ, ಕಾಶ್ಮೀರದ ಪರ್ವತ ಶ್ರೇಣಿಗಳ, ರಾಜಾಸ್ಥಾನದ ಮರಳ್ಗಾಡುಗಳ ಸುಂದರ ದೃಶ್ಯ ವೈಭವದಿಂದ ಕೂಡಿದೆ. ತಾಂತ್ರಿಕ ದೃಷ್ಟಿಯಿಂದಲೂ ಗಮನಾರ್ಹವಾದ ಈ ಚಿತ್ರ ಯುದ್ಧದ ದುಷ್ಪರಿಣಾಮ ಕುರಿತಾದ ಸಂದೇಶ ಸಾರುತ್ತದೆ (1998). ಬಂಧನ 1985ರ ಮಾಸ್ಕೊ ಚಲನಚಿತ್ರೋತ್ಸವಕ್ಕೆ ಆಯ್ಕೆ ಆದಾಗ ರಷ್ಯಾ ಪ್ರವಾಸ ಮಾಡಿದರು. 1987ರಲ್ಲಿ ಸಿಂಹದ ಮರಿ ಸೈನ್ಯದೊಂದಿಗೆ ಇಂಗ್ಲೆಂಡ್, ಥಾಯ್ಲೆಂಡ್, ಇಂಡೋನೇಷ್ಯಾ, ಸಿಂಗಪುರಗಳಲ್ಲಿ ಪ್ರವಾಸ ಮಾಡಿದರು. ಕನ್ನಡ ಚಿತ್ರಗಳಲ್ಲದೆ ಸಾಮ್ರಾಟ್, ಪ್ರೇಮಯುದ್ಧ, ತೇನಮನಸ್ಸು, ತೆಲಗು ಚಿತ್ರಗಳನ್ನು  ಮೇರಿ ಆವಾಜ್ ಸುನೊ, ಶರಾರ, ದಿಲೀಪ್-ರೇಖಾ ಭೂಮಿಕೆಯ ಆಗ್ ಕೆ ದರಿಯಾ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 

ರಾಜೇಂದ್ರಸಿಂಗ್ ಬಾಬು  ಸುಮಾರು 20 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ``ಬಣ್ಣದ ಗೆಜ್ಜೆ, ``ಕಿಲಾಡಿ ಜೋಡಿ'', ``ಮುಂಗಾರಿನ ಮಿಂಚು, ``ಭೂಮಿತಾಯಿಯ ಚೊಚ್ಚಲ ಮಗ ``ಹೂವು ಹಣ್ಣು, ``ಕುರಿಗಳು ಸಾರ್ ಕುರಿಗಳು ಇವು ಕೆಲವು ಪ್ರಮುಖ ಚಿತ್ರಗಳು. ಸದಾ ಸುದ್ದಿಯಲ್ಲಿರುವ ಬಾಬು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾಗಿಯೂ ದುಡಿದವರು.
ಮುತ್ತಿನ ಹಾರಕ್ಕೆ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಬಂದಿದೆ. ``ಕುರಿಗಳು ಸಾರ್ ಕುರಿಗಳು ರಾಜ್ಯಪ್ರಶಸ್ತಿ ಪಡೆದ ಇನ್ನೊಂದು ಚಿತ್ರ.  ರಾಜೇಂದ್ರಸಿಂಗ್ ಬಾಬು ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿರುವ ಸಮಗ್ರ ಸೇವೆಯನ್ನು ಗುರುತಿಸಿದ ರಾಜ್ಯಸರ್ಕಾರ ಇವರಿಗೆ 1996-97ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ ಪುರಸ್ಕರಿಸಿದೆ. ಬಾಬು ಅವರ ಪುತ್ರ ದುಷ್ಯಂತ್ ಈಚೆಗೆ ಕನ್ನಡ ಚಿತ್ರರಂಗದ ಉದಯೋನ್ಮುಖ ನಾಯಕನಟನಾಗಿ ಪರಿಚಿತರಾಗಿದ್ದಾರೆ. ಇವರ ಸಹೋದರಿ ವಿಜಯಲಕ್ಷ್ಮಿಸಿಂಗ್ ನಿರ್ಮಾಪಕಿ ಹಾಗೂ ನಟಿಯಾಗಿ ಪರಿಚಿತರು.							(ನೋಡಿ- ಪ್ರತಿಮಾದೇವಿ-ಶಂಕರಸಿಂಗ್)
  (ಶ್ರೀಕೃಪಾ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ